ಆರ್ಯಭಟ ಭಾರತದ ಮೊಟ್ಟಮೊದಲ ಕೃತಕ ಉಪಗ್ರಹದ ಹೆಸರು. ಪ್ರಾಚೀನ ಭಾರತೀಯ ಗಣಿತಜ್ಞ ಆರ್ಯಭಟನ ಗೌರವಾರ್ಥವಾಗಿ ಈ ಹೆಸರನ್ನು ಇದಕ್ಕೆ ಇಡಲಾಯಿತು. ಇದನ್ನು ಭಾರತದ ಇಸ್ರೋ ಸಂಸ್ಥೆಯು ಬೆಂಗಳೂರಿನಲ್ಲಿರುವ ತನ್ನ ಉಪಗ್ರಹ ಕೇಂದ್ರದಲ್ಲಿ ನಿರ್ಮಿಸಿತು. ಈ ಉಪಗ್ರಹವು ತನ್ನ ಅಕ್ಷದಲ್ಲಿ ಗಿರಕಿ ಹೊಡೆದು ತನ್ನ ಸ್ಥಿರತೆಯನ್ನು ಕಾಯ್ದುಕೊಳ್ಳುವ ತೆರನಾಗಿತ್ತು. ಏಪ್ರಿಲ್ ೨೧, ೧೯೭೫ ರಲ್ಲಿ ರಷ್ಯದ ಸಹಾಯದಿ೦ದ ರಷ್ಯದ ಕಪುಟ್ಸಿನ್ ಯಾರ್ ಎ೦ಬ ಉಡ್ಡಯನ ಕೇ೦ದ್ರದಿ೦ದ ಈ ಉಪಗ್ರಹವನ್ನು ಕಕ್ಷೆಗೆ ಒಯ್ಯಲಾಯಿತು. ಉಪಗ್ರಹ ೨೬ ಮುಖಗಳನ್ನು ಹೊ೦ದಿದ್ದು, ಸುಮಾರು ೧.೪ ಮೀ ವ್ಯಾಸವನ್ನು ಹೊ೦ದಿತ್ತು. ೨೪ ಮುಖಗಳ ಮೇಲೆ ಸೌರಚಾಲಿತ ವಿದ್ಯುತ್ ಕೋಶಗಳನ್ನು (ಬ್ಯಾಟರಿಗಳನ್ನು) ಅಳವಡಿಸಲಾಗಿತ್ತು. ಆರ್ಯಭಟ ಉಪಗ್ರಹದ ಮುಖ್ಯ ಉದ್ದೇಶಗಳು ಹೀಗಿದ್ದವು: ಎಕ್ಸ್-ರೇ ಖಗೋಳಶಾಸ್ತ್ರದ ಅಧ್ಯಯನ ಸೌರಭೌತಶಾಸ್ತ್ರದ ( ) ಅಧ್ಯಯನ ಆದರೆ ಕಕ್ಷೆಯಲ್ಲಿ ಬಿಟ್ಟು ನಾಲ್ಕೇ ದಿನಗಳಲ್ಲಿ ಆರ್ಯಭಟ ಉಪಗ್ರಹದಲ್ಲಿ ವಿದ್ಯುಚ್ಛಕ್ತಿ ವೈಫಲ್ಯ ಉ೦ಟಾಗಿ ಐದನೇ ದಿನ ಭೂಮಿಯಿ೦ದ ಉಪಗ್ರಹಕ್ಕೆ ಇದ್ದ ಸ೦ಪರ್ಕ ಕಡಿದುಹೋಯಿತು. ಫೆಬ್ರವರಿ ೧೧, ೧೯೯೨ ರಂದು ಉಪಗ್ರಹವನ್ನು ಅದರ ಕಕ್ಷೆಯಿ೦ದ ಭೂಮಿಯ ವಾತಾವರಣಕ್ಕೆ ಕುಸಿಯಿತು.